ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಶೀಘ್ರದಲ್ಲೇ ಹೊಸ ನಿಯಮಗಳು ಜಾರಿಯಾಗುವ ಸಾಧ್ಯತೆ ಇದೆ. ಯೋಜನೆಯ ದುರುಪಯೋಗ ತಡೆಗಟ್ಟಲು ಹಾಗೂ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಹೊರಗಿಡಲು ಇಂಧನ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ ಸುಮಾರು 1.70 ಕೋಟಿ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಯೋಜನೆಯ ಲಾಭವನ್ನು ಕೆಲವರು ನಿಯಮ ಉಲ್ಲಂಘಿಸಿ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮರುಪರಿಶೀಲನೆ ಪ್ರಕ್ರಿಯೆ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.

ವಾಣಿಜ್ಯ ಬಳಕೆಗೆ ಬ್ರೇಕ್

ಗೃಹ ಜ್ಯೋತಿ ಯೋಜನೆ ಕೇವಲ ಗೃಹಬಳಕೆಗೆ ಮಾತ್ರ ಸೀಮಿತವಾಗಿದೆ. ಆದರೆ ಕೆಲವು ಕಡೆಗಳಲ್ಲಿ ಮನೆ ಹೆಸರಿನಲ್ಲಿ ಪಡೆದಿರುವ ಉಚಿತ ವಿದ್ಯುತ್ ಸಂಪರ್ಕವನ್ನು ಅಂಗಡಿಗಳು, ಮಳಿಗೆಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವ ಆರೋಪಗಳು ಕೇಳಿಬಂದಿವೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ, ಅನರ್ಹರಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ.

ಅನ್ಯರಾಜ್ಯದ ಫಲಾನುಭವಿಗಳ ಮೇಲೂ ನಿಗಾ

ಕರ್ನಾಟಕದ ನಿವಾಸಿಗಳ ಹೆಸರಿನಲ್ಲಿ ಹೊರ ರಾಜ್ಯದ ಕೆಲವರು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿರುವುದರಿಂದ, ಇಂತಹ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಇ-ಕೆವೈಸಿ ಮತ್ತು ಆಧಾರ್ ಲಿಂಕ್ ಕಡ್ಡಾಯ?

ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಕೆಲವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.

ಇವುಗಳ ಕುರಿತು ಅಧಿಕೃತ ಆದೇಶ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಕಾರ್ಯಕ್ಷಮತೆ ಪ್ರಶ್ನೆಗೊಳಗೆ

ಗ್ಯಾರೆಂಟಿ ಯೋಜನೆಗಳ ಮೇಲ್ವಿಚಾರಣೆಗಾಗಿ ರಾಜ್ಯ ಸರ್ಕಾರ ಒಟ್ಟು 4,580 ಸದಸ್ಯರ ಪ್ರಾಧಿಕಾರ ರಚಿಸಿದ್ದು, ಇವರಿಗೆ ನೀಡಲಾಗುವ ಗೌರವಧನಕ್ಕಾಗಿ ವರ್ಷಕ್ಕೆ 23 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತಿದೆ.

ಇಷ್ಟೊಂದು ದೊಡ್ಡ ವ್ಯವಸ್ಥೆ ಇದ್ದರೂ ಯೋಜನೆಗಳಲ್ಲಿ ಅಕ್ರಮಗಳು ಹಾಗೂ ದುರುಪಯೋಗದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಾರ್ಯಕ್ಷಮತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಸಂಬಂಧ ಸರ್ಕಾರದಿಂದ ಅಧಿಕೃತ ಆದೇಶ ಹೊರಬಂದ ಬಳಿಕ ಹೊಸ ನಿಯಮಗಳು ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

Leave a Reply

Your email address will not be published. Required fields are marked *